ರೀಡ್, ವಿಲಿಯಂ ಬೆಡ್‍ಫೋರ್ಡ್
1806-76. ಅಮೆರಿಕದ ನ್ಯಾಯ ವಾದಿ. 1806 ಜೂನ್ 30ರಂದು ಫಿಲಡೆಲ್ಫಿಯದಲ್ಲಿ ಜನಿಸಿದ. 1825ರಲ್ಲಿ ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದಿಂದ ಪದವೀಧರನಾದ. ಜೋಲ್ ಆರ್ ಪಾಯಿನ್‍ಸೆಟ್‍ನ ಆಪ್ತಕಾರ್ಯದರ್ಶಿಯಾಗಿ ಆತನೊಡನೆ ಮೆಕ್ಸಿಕೊ ಸಂದರ್ಶಿಸಿದ; ಬಳಿಕ ನ್ಯಾಯವಾದಿಯಾಗಿ. 1838ರಲ್ಲಿ ಪೆನ್ಸಿಲ್ವೇನಿಯದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ. 1850ರಲ್ಲಿ ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದಲ್ಲಿ ಅಮೆರಿಕ ಇತಿಹಾಸ ಪ್ರಾಧ್ಯಾಪಕನಾಗಿ ನೇಮಕಗೊಂಡ. 1857ರಲ್ಲಿ ಚೀನ ದೇಶಕ್ಕೆ ಅಮೆರಿಕ ಸಂಯುಕ್ತ ಸಂಸ್ಥಾನಗಳ ಸಚಿವನಾಗಿ ಕಾರ್ಯ ನಿರ್ವಹಿಸಿದ. ಈ ಸಮಯದಲ್ಲಿ ಚೀನದೊಂದಿಗೆ ಒಪ್ಪಂದ ಮಾಡಿಕೊಂಡು ಆ ಮೂಲಕ ವಾಣಿಜ್ಯ ಸಂಬಂಧಗಳನ್ನು ನಿಯಂತ್ರಿಸಿದ. 1844ಕ್ಕೂ ಹಿಂದಿನ ಒಪ್ಪಂದದಿಂದ ಪಡೆದ ಹಕ್ಕುಗಳನ್ನು ಮತ್ತಷ್ಟು ಸುರಕ್ಷಿತಗೊಳಿಸಿದ.

1860ರಲ್ಲಿ ಅಮೆರಿಕಕ್ಕೆ ಮರಳಿದ ಅನಂತರ ನ್ಯೂಯಾರ್ಕ್‍ನಲ್ಲಿ ನೆಲೆಸಿ ಲಂಡನ್ ಟೈಮ್ಸ್‍ನೊಂದಿಗೆ ಪತ್ರವ್ಯವಹಾರ ನಡೆಸಿದ. ಜೊತೆಗೆ ಅಮೆರಿಕನ್ ಕ್ವಾರ್ಟರ್ಲಿ ರಿವ್ಯೂ ಮತ್ತು ದಿ ನಾರ್ತ್ ಅಮೆರಿಕ ರಿವ್ಯೂ ಎಂಬ ಪತ್ರಿಕೆಗಳಿಗೆ ಲೇಖನಗಳನ್ನು ಬರೆದ. ತನ್ನ ತಾತ ಜೋಸೆಫ್ ರೀಡ್ ಅಮೆರಿಕದ ಧ್ಯೇಯ ತೊರೆದು ಬ್ರಿಟಿಷರೊಡನೆ ಸೇರಿಕೊಂಡಿದ್ದಾನೆ ಎಂಬ ಇತಿಹಾಸಕಾರರ ಆಪಾದನೆ ಕೇಳಿ ಈತ ಜಾರ್ಜ್ ಬ್ಯಾಂಕ್ರಾಫ್ಟ್‍ನೊಂದಿಗೆ ವಾದಮಾಡಿದ. ಅನಂತರ ಈತ ಪ್ರೆಸಿಡೆಂಟ್ ರೀಡ್ ಆಫ್ ಪೆನ್ಸಿಲ್ವೇನಿಯ, ಎ ರಿಪ್ಲೈ ಟು ಜಾರ್ಜ್ ಬ್ಯಾಂಕ್ರಾಫ್ಟ್ ಅಂಡ್ ಅದರ್ಸ್ ಎಂಬ ಕೃತಿಗಳನ್ನು ಬರೆದ (1867). ಬ್ಯಾಂಕ್ರಾಫ್ಟ್ ಅದೇ ವರ್ಷ ಜೋಸೆಫ್ ರೀಡ್ ಎನ್ ಹಿಸ್ಟಾರಿಕಲ್ ಎಸ್ಸೆ ಎಂಬ ಪ್ರಬಂಧ ಬರೆದು ರೀಡ್‍ನ ವಾದಕ್ಕೆ ಪ್ರತಿಕ್ರಿಯೆ ತೋರಿದ. ರೀಡ್ ಆಗ ಎ ರಿಜಾಯಿಂಡರ್ ಟು ಮಿಸ್ಟರ್ ಬ್ಯಾಂಕ್ರಾಫ್ಟ್ಸ್ ಹಿಸ್ಟಾರಿಕಲ್ ಎಸ್ಸೆ (1867) ಎಂಬ ಪ್ರಬಂಧದ ಮೂಲಕ ಉತ್ತರ ನೀಡಿದ.

ಲೈಫ್ ಅಂಡ್ ಕರೆಸ್ಪಾಂಡೆನ್ಸ್ ಆಫ್ ಜೋಸೆಫ್ ರೀಡ್ (1847) ಮತ್ತು ಲೈಫ್ ಆಫ್ ಎಸ್ತರ್‍ಡೇ ಬರ್ಟ್ (1853) ಈತನ ಮುಖ್ಯ ಗ್ರಂಥಗಳು.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ